ಪೌರಶಿಕ್ಷಣ
	ವ್ಯಕ್ತಿ ತನ್ನ ಹೊಣೆಗಾರಿಕೆಯನ್ನು ಹಕ್ಕು ಬಾದ್ಯತೆಗಳನ್ನು ನಿರ್ವಹಿಸಲು ಅನುವಾಗುವ ಶಿಕ್ಷಣ. ಉತ್ತಮ ಪೌರ ಅಥವಾ ನಾಗರಿಕನಲ್ಲಿ ಮಾನವ ಪ್ರೇಮ, ಸ್ವದೇಶ ಭಕ್ತಿ ಮುಂತಾದ ಶೀಲ ಸಂಪನ್ನತೆ; ಸಾರ್ವಜನಿಕ ಹಿತಕ್ಕಾಗಿ ದುಡಿಯಲು ಬೇಕಾದ ಯೋಗ್ಯತೆ ಮತ್ತು ಸಹಕಾರ ಮನೋಭಾವ. ಆತ್ಮಗೌರವ ಪರಮತ ಮತ್ತು ಪರಾಭಿಪ್ರಾಯ ಸಹಿಷ್ಣುತೆ, ಸೂಕ್ಷ್ಮ ಬುದ್ಧಿ, ವಿಷಯವನ್ನು ಗ್ರಹಿಸಿ ಪರಿಶೀಲಿಸಿ ಸರಿಯಾದ ತೀರ್ಮಾನಕ್ಕೆ ಬರುವ ಯೋಗ್ಯತೆ, ವಿವೇಚನೆ, ಸ್ವಾವಲಂಬನ, ಸೃಷ್ಟಿ ಸೌಂದರ್ಯ ಜ್ಞಾನ, ಹರ್ಷಚಿತ್ತ, ರಸಿಕತನ ಮೊದಲಾದ ಗುಣಗಳು ಅಗತ್ಯವೆನಿಸುತ್ತವೆ. ಪೌರ ಶಿಕ್ಷಣದ ಉದ್ದೇಶ ಈ ಗುಣಶೀಲಗಳನ್ನು ಮಕ್ಕಳಲ್ಲಿ ವೃದ್ಧಿಸುವುದೇ ಆಗಿದೆ. ಈಚೆಗೆ ಪ್ರಜಾಧರ್ಮ, ಪೌರನೀತಿ ಮುಂತಾದ ಹೆಸರುಗಳಿಂದ ಇದನ್ನೊಂದು ವ್ಯಾಸಂಗ ವಿಷಯವಾಗಿ ಪಠ್ಯಕ್ರಮದಲ್ಲೂ ಸೇರಿಸಲಾಗಿದೆ.

ಶಾಲೆಗಳಲ್ಲಿ ನಾಗರಿಕತೆ ತರಬೇತಿ ಕಾರ್ಯ ಹೀಗೆ ನಡೆಯುತ್ತಿದೆ. ಹೊಣೆಗಾರಿಕೆಯನ್ನು ಹೊತ್ತು ಅದನ್ನು ತೃಪ್ತಿಕರವಾದ ರೀತಿಯಲ್ಲಿ ನಿರ್ಧರಿಸುವಂತೆ ಶಾಲಾ ವ್ಯವಸ್ಥೆಯನ್ನು ರೂಪಿಸುವುದು, ಶಾಲೆಯನ್ನು ಸ್ವಾವಲಂಬಿ ಸಂಸ್ಥೆಯನ್ನಾಗಿ ಪರಿವರ್ತಿಸಿ ಉಪಾಧ್ಯಾಯರ ನೇತೃತ್ವದಲ್ಲಿ ದಳನಾಯಕತ್ವ, ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಮಂಡಲಿಗಳ ರಚನೆ, ವಿದ್ಯಾರ್ಥಿ ಆಡಳಿತ ಮಂಡಲಿ, ವಿವಿಧ ಸಂಘ ಸಂಸ್ಥೆಗಳು, ಪ್ರವಾಸ ಮೊದಲಾದುವುಗಳ ಮೂಲಕ ಶಾಲಾ ಸಂಸ್ಥೆಯ ಆಡಳಿತವನ್ನು ನಿರ್ವಹಿಸುವುದು. ಮಕ್ಕಳನ್ನು ಆಕರ್ಷಿಸುವ ಹಬ್ಬಹುಣ್ಣಿಮೆ ಮತ್ತು ರಾಷ್ಟ್ರೀಯ ದಿನಾಚರಣೆ ಮುಂತಾದ ಚಟುವಟಿಕೆಗಳ ಮೂಲಕ ಅವರಲ್ಲಿ ದೈವಭಕ್ತಿ, ಗುರುಭಕ್ತಿ, ಆತ್ಮಗೌರವ, ಶಿಸ್ತು, ನಿಸ್ವಾರ್ಥತೆ, ಸ್ವಾವಲಂಬನ, ಜಾಣ್ಮೆ, ಆತ್ಮಶಕ್ತಿ, ವ್ಯಾವಹಾರಿಕ ಜಾಣತನ, ಜೀವನಾನುಭೋಗ ಮೊದಲಾದ ಉತ್ತಮ ಶೀಲದ ಗುಣಗಳನ್ನು ವೃದ್ಧಿಸುವುದು.

ಈಚೆಗೆ ಪಾಶ್ಚಾತ್ಯ ದೇಶಗಳಲ್ಲಿ ವಿದ್ಯಾರ್ಥಿಗಳಲ್ಲಿ ಪೌರಧರ್ಮವನ್ನು ಅನುಷ್ಠಾನಕ್ಕೆ ತರುವಂಥ ವಿವಿಧ ವ್ಯವಸ್ಥೆಗಳು ಆಚರಣೆಗೆ ಬರುತ್ತಿವೆ. ಆಯಾ ದೇಶದಲ್ಲಿ ಪ್ರಚಾರದಲ್ಲಿರುವ ರಾಜಕೀಯ ವ್ಯವಸ್ಥೆಯ ಸ್ವರೂಪದಲ್ಲೇ ವಿದ್ಯಾರ್ಥಿ ಆಡಳಿತ ಸಂಸ್ಥೆಗಳೂ ಕೆಲಸ ಮಾಡುತ್ತವೆ. ಆ ಮೂಲಕ ಅವರಿಗೆ ಅಲ್ಲಿನ ಪೌರ ಜೀವನಕ್ಕೆ ಅಗತ್ಯವಾದ ಗುಣಶೀಲಗಳೂ ಮನೋಭಾವಗಳೂ ಶಕ್ತಿ ಸಾಮಥ್ರ್ಯಗಳೂ ಮೂಡುವುವೆಂದು ನಂಬಲಾಗಿದೆ.
(ಬಿ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ